Bangalore has been intoxicating from ages!

ಅಂಥ ಲಾಲ್‍ಬಾಗಿನ ಒಳಹೊಕ್ಕು ಇಲ್ಲಿನ ಪಾರ್ಕನ್ನು ನೆನೆಯಲಾದೀತೆ?

     ಯಾವುದೇ ಸಣ್ಣ ಪುಟ್ಟ ಪಟ್ಟಣ-ಹಳ್ಳಿಗಳ ಯುವಜನರನ್ನು ಕೇಳಿನೋಡಿ.  ಹೇಗಾದರೂ ಮಾಡಿ ಬೆಂಗಳೂರು ಸೇರಿಕೊಳ್ಳಬೇಕೆಂಬ ಅದಮ್ಯ ತುಡಿತ ಅವರಿಗಿರುತ್ತದೆ.  ನಮ್ಮ ಈ ಬೆಂಗಳೂರು ಎಲ್ಲ ಮಂದಿಗೂ ಒಂದು `ಮಾಯಾನಗರಿ’.  ಈ ಮಾತನ್ನು `ಎಲ್ಲ ಕಾಲಕ್ಕೂ’ ಎಂದು ಅನ್ವಯಿಸಿದರೆ ತಪ್ಪೇನಿಲ್ಲ.  ಅರವತ್ತೈದು ವರ್ಷಗಳ ಹಿಂದೆ ತುಮಕೂರಿನ ಸರ್ಕಾರಿ ಪ್ರೌಢಶಾಲೆಯ ಐದನೇ ಫಾರ್ಮ್ (ಎಸ್.ಎಸ್.ಎಲ್.ಸಿ. ಯ ಹಿಂದಿನ ತರಗತಿ) ಓದುತ್ತಿದ್ದ, ಹದಿನೈದು ವರ್ಷಗಳೂ ತುಂಬದ ಹುಡುಗ, ಬೆಂಗಳೂರು ಸೇರಿದ ಮಿತ್ರನೊಬ್ಬನಿಗೆ ಹೀಗೊಂದು ಪತ್ರ ಬರೆಯುತ್ತಾನೆ.  ಆಗೆಲ್ಲಾ ಪತ್ರ ಬರೆಯುವ ಕಲೆ ಗೊತ್ತಿದ್ದ ಮಂದಿ ಸ್ವಲ್ಪವೇ ಇದ್ದರು.  ಈಗಲೂ ಅಷ್ಟೇ, ಇ-ಮೇಲ್ ಬಂದ ಮೇಲೆ ಪತ್ರ ಬರೆಯಲು ನಮ್ಮ ಯಾರ ಕೈಯೂ ಓಡುವುದಿಲ್ಲ. 

 ತಾ.೯-೭-೧೯೪೨ (9-7-1942)

 `ಪ್ರಿಯ ಮಿತ್ರಾ,

      ಕಲ್ಯಾಣಪುರಿಯ ವೈಭವದಲ್ಲಿ ಅಡಗಿದ ನಿನ್ನ ದೃಷ್ಟಿ ಈ ಬಡ ತುಮಕೂರಿನ ಕಡೆಗೆ ತಿರುಗಿಯೂ ಕೂಡ ನೋಡದೆಂದು ಕಾಣುತ್ತದೆ.  ಹೇಗಾದರೂ ಆಗಬೇಕು? ಪಾಪ!  ಭವ್ಯವಾದ ಕಟ್ಟಡದಲ್ಲಿ ಶಿಕ್ಷಣ – ತುಮಕೂರು ಹೈಸ್ಕೂಲ ಹಾಳು ಗೋಡೆಗಳಲ್ಲಿ ಅಥವಾ ಇಲ್ಲಿನ ಕಾಲೇಜಿನಂತಹ ಬಾಡಿಗೆ ಕೊಠಡಿಗಳಲ್ಲ!  ಸಮೀಪದಲ್ಲಿ ಸೆಂಟ್ರಲ್ ಕಾಲೇಜಿನ ರಮಣೀಯ ದೃಶ್ಯ!  ಹೊಸ ಹೊಸ ಗೆಳೆಯರು, ಸುಖ ವಾತಾವರಣ, ದಿವಸಕ್ಕೊಮ್ಮೆಯಾದರೂ ಆತಿಥ್ಯವನ್ನೀಯುವ ಹೋಟಲುಗಳು, ವಾರಕ್ಕೊಮ್ಮೆಯಾದರೂ ಸೆಳೆಯುವ ಸಿನಿಮಾ ಮಂದಿರಗಳು, ಆಗಾಗ್ಯೆ ದಯಮಾಡಿಸುವ ಪ್ರಮುಖ ವ್ಯಕ್ತಿಗಳು, ಭಾಷಣಗಳು, ಯಾವುದಾದರೂ ಬಗೆಯಲ್ಲಿ ಏನಾದರೂ ನೋಡಿಸುವ ಉದ್ದೇಶದಿಂದ ಕರೆಯುವ ಉಪವನಗಳು.  ಇವುಗಳಲ್ಲಿ ತಲ್ಲೀನನಾದವನಿಗೆ ತಾನೊಂದಾನೊಂದು ಕಾಲದಲ್ಲಿದ್ದ ಊರಿನ ನೆನಪಾಗುವುದು ಅಪರೂಪ.  ಒಂದು ವೇಳೆ ನೆನಪಾದರೂ ಸುತ್ತಣ ವಾತಾವರಣವು ಥಟ್ಟನೆ ಮಣಿಸಿ ಬಿಡುವುದು.  ಇಂತಹ ರಸಭರಿತ ನೋಟದೆದುರಿಗೆ ನೀರಸ ದೃಶ್ಯವು ಎದಿರಾಗುವುದೆಂತು?  `ಸಾಗರ್ ಟಾಕೀಸ್’ ಎದುರು ನಿಂತಾಗ ಇಲ್ಲಿನ `ರಾಜಾ ಟಾಕೀಸಿ’ನ ಸ್ಮೃತಿಯಾದರೆ ಅದೊಂದು ಮಾನಸಿಕ ದೌರ್ಬಲ್ಯವೆನ್ನಬೇಕು!  ಲಾಲ್‍ಬಾಗಿನ ಒಳಹೊಕ್ಕು ಇಲ್ಲಿನ ಟೌನ್‍ಹಾಲ್ ಮುಂದಣ ಪಾರ್ಕನ್ನು ನೆನೆಯುವುದೆ! ಛೀ, ಅಲ್ಲಿಯ ಸೌಧಗಳೆದುರಿಗೆ ಇಲ್ಲಿನ ಮಹಡಿ ಮನೆಗಳನ್ನು ಸುಡಬೇಕು!  ಈ ತೆರನ ಭಾವನೆಗಳು ಕೇವಲ ಎರಡೇ ದಿನ ಅಲ್ಲಿ ಅಡ್ಡಾಡಿದ ನನ್ನಲ್ಲೇ ಉದಯಿಸುವಾಗ ಸುಮಾರು ಒಂದು ತಿಂಗಳಿನಿಂದ ಅಲ್ಲಿ ನೆಲೆಸಿದಾತನಿಗೆ ಇದು ಸ್ವಾಭಾವಿಕ!  ಆದರೆ, ನಿನ್ನ ಮಿತ್ರನೊಬ್ಬನು ಇಲ್ಲಿರುವನೆಂದು ನಿನಗೆ ಮನವರಿಕೆಯಾಗದಿರುವುದು ಏನು ಕಾರಣವೋ ನಾನರಿಯೆ.

     ಇಲ್ಲಿಂದ ಹೊರಡುವಂದು ಇನ್ನು ಹಲವಾರು ದಿನಗಳಲ್ಲಿ ನಿನಗೆ ಕಾಗದ ಬರೆಯುವೆನೆಂದು ಒತ್ತಿ ಹೇಳಿ ಹೊರಟೆ.  ಆದರೆ ದಿನಗಳ ಮೇಲೆ ದಿನಗಳುರುಳಿ ತಿಂಗಳಾಯಿತು.  ಇನ್ನಾದರೂ ಸುದ್ದಿಯಿಲ್ಲ.  ನಿಮ್ಮ `ಅಚ್ಯುತಿ’ಯನ್ನು ನಿನ್ನಿಂದ ಕಾಗದ ಬಂದಿತ್ತೇ ಎಂದು ಸುಮಾರು ಇಪ್ಪತ್ತು ದಿನಗಳ ಕೆಳಗೆ ಕೇಳಲು ಅವನು ಬಂದಿತ್ತೆಂದೂ, ನೀನು ಹೋಟಲಿನಲ್ಲಿರುವೆಯೆಂದೂ ಹೇಳಿದನು.  ಅಂದಿನಿಂದ ಇದುವರೆಗೆ ಅವನು ಹೇಳಿದ್ದರಲ್ಲಿ ನಿನ್ನಿಂದ ಯಾವ ಕಾಗದವೂ ಬಂದಿಲ್ಲವೆಂದು ತಿಳಿಸಿದನು.  ನಾನೂ ಕಾದೂ ಕಾದೂ ಸಾಕಾಗಿ ಇಂದು ನಿನಗೆ ಬರೆದಿದ್ದೇನೆ.  ನೀನಾದರೂ ಇದನ್ನು ಮೊಗವೆತ್ತಿ ನೋಡುವೆಯೊ ಇಲ್ಲವೆ ಬೇಸರದಿಂದ ಬಿಸುಡುವೆಯೊ ನಾನರಿಯೆ.  ಹೇಗಾದರಾಗಲಿ, ಬೇಸರದಿಂದಲೇ ಒಂದು ಕಾರ್ಡನ್ನಾದರೂ ಗೀಚಿದರೆ ನಿನ್ನ ಗೆಳೆಯನಿಗೆ ಆನಂದ!

     ಬರೆಯುವುದು ಬಹಳವಿದೆ.  ಆದರೆ ಜಾಗ ಮಾತ್ರ ಬಹು ಅಲ್ಪ.  ನಿನ್ನಿಂದ ಪ್ರತ್ಯುತ್ತರ ಬಂದದ್ದನ್ನು ನೋಡಿ ನಿನಗೊಂದು ದೀರ್ಘ ಪತ್ರ ಬರೆಯುತ್ತೇನೆ.  ಸಂಘದ ಕಾರ್ಯಕಲಾಪಗಳು ಸುಗಮವಾಗಿ ನಡೆಯುತ್ತಿವೆ.  ಎ.ಎನ್.ಎ. ಮತ್ತು ಜಿ.ಆರ್.ಎಸ್. ರ ಸಂಪಾದಕತ್ವದಲ್ಲಿ `ಕೇಸರಿ’ಯ ಒಂದು ಸಂಚಿಕೆಯೂ (ಬಹು ಅಂದವಾಗಿ) ಹೊರಬಿದ್ದಿದೆ.  ಇದೇ 4ನೇ ತಾರೀಕು ನಮ್ಮ ಸಂಘದ ಆಶ್ರಯದಲ್ಲಿ ಶ್ರೀಮಾನ್ ತ.ರಾ. ಸುಬ್ಬರಾಯರು (ದಿವಂಗತ T.S.V. ರವರ ಸಂಬಂಧಿಗಳು) `ಜೀವನ ಮತ್ತು ಕಲೆ’ ಎಂಬ ವಿಷಯವಾಗಿ ಭಾಷಣ ಮಾಡಿದರು.  ಈಗ Convener ನಾನೇ!  ಶ್ರೀ ನೊ.ಸಂ. ಶ್ರೀನಿವಾಸ ಐಯ್ಯಂಗಾರ್, ಎಸ್.ವಿ. ಪರಮೇಶ್ವರ ಭಟ್ಟರು ಇತ್ಯಾದಿಗಳನೇಕರಿಗೆ ತಮ್ಮ ಸಂಪಾದಕತ್ವದಲ್ಲಿ ಪ್ರಕಟವಾದ ಸಂಚಿಕೆಗಳನ್ನು ತೋರಿಸಿದೆವು.  ಅವರು ತಮ್ಮನ್ನು ಬಹು ಶ್ಲಾಘಿಸಿದರು.  ನಿಮ್ಮ ಲೇಖನಗಳಿಲ್ಲದಿದ್ದರೆ ಸಂಚಿಕೆಯ ಕಳೆ ಸ್ವಲ್ಪ ಕುಂದಿದ ಹಾಗೆ.  ತಿಂಗಳಿಗೆ ಒಂದಾದರೂ ಲೇಖನವನ್ನು ಬರೆದು ಕಳಿಸುವುದಾದರೆ ಬಹು ಸಂತೋಷ.

     ಶ್ರೀಮನ್ಮಹಾರಾಜರವರು ನಿನ್ನೆ ಇಲ್ಲಿಗೆ ದಯಮಾಡಿಸಿದ್ದರು.  ಇಲ್ಲಿ ಅತ್ಯಂತ ಜನಸಂದಣಿ (ಬೆಂಗಳೂರಿನಂತಹುದಲ್ಲ.  ದಯವಿಟ್ಟು ನನ್ನ ಮೌಢ್ಯಕ್ಕೆ ನಗಬೇಡ).  ನಿನ್ನೆ ನಮಗೆಲ್ಲಾ ರಜ!

     ಅಂಚೆ ಕಾರ್ಡಿನಲ್ಲಿನ ಪುಟ್ಟದೊಂದು ಪತ್ರವಾಗಲಿ, ಹಾಸ್ಯ ಲೇಖನವಾಗಲಿ ಅಥವಾ ಗಹನವಾದ ವಿಷಯದ ಮೇಲಿನ ಸಂಪಾದಕೀಯವಾಗಲಿ ಬರೆಯುವ ಮುನ್ನ ಕರಡು ಪ್ರತಿಯೊಂದು ರೂಪುಗೊಳ್ಳಲೇ ಬೇಕು.  ಅವೆಲ್ಲವೂ ದಾಖಲಾಗುತ್ತಿದ್ದದ್ದು ಗುಂಡಾದ ಪುಟ್ಟ ಅಕ್ಷರಗಳಲ್ಲಿ, ಒಂದು ಬದಿ ಉಪಯೋಗಿಸಿದ ಕಾಗದದ ತುಣುಕುಗಳಲ್ಲಿ.  ಇದು ಹಿರಿಯ ಪತ್ರಕರ್ತ ನನ್ನ ತಂದೆ ಹೆಚ್.ಆರ್. ನಾಗೇಶರಾಯರು (ನಿವೃತ್ತ ಸ್ಥಾನಿಕ ಸಂಪಾದಕರು, ಸಂಯುಕ್ತ ಕರ್ನಾಟಕ) ಕಡೆಯ ತನಕ ತಪ್ಪದೇ ಪಾಲಿಸಿಕೊಂಡು ಬಂದ ಒಂದು ನೀತಿ.  ಶಾಲಾ ದಿನಗಳಿಂದಲೂ ಅವರಿಗಿದ್ದ ಹವ್ಯಾಸವೆಂದರೆ ಇಂಥ ಯಾವುದೇ ದಾಖಲೆಯನ್ನು ಹರಿದು ಬಿಸುಡದೇ, ಮೂಲೆಯೊಂದರಲ್ಲಿ ಅಂದಿನ ದಿನಾಂಕವನ್ನು ನಮೂದಿಸಿ, ಜತೆಗೂಡಿದ ತುಣಕುಗಳನ್ನು ಪುಟ್ಟ ಕವರುಗಳಲ್ಲಿ ಅಡಕ ಮಾಡುವುದು.  ದಶಕಗಳು ಉರುಳಿದಂತೆ ಈ ಭಂಡಾರವನ್ನು ಬೆಳೆಸುತ್ತಾ ಹೋದರು.  ಅಚಾನಕ್ಕಾಗಿ ಸಿಕ್ಕ ಕೆಲ ಮಾಹಿತಿ ತುಣುಕುಗಳು ಅವರ ಬಾಲ್ಯದ ದಿನಗಳತ್ತ ಇಣುಕು ನೋಟ ಬೀರುತ್ತವೆ.  ಈ ಪತ್ರ ಯಾರನ್ನು ಉದ್ದೇಶಿಸಿದ್ದೆಂಬುದು ಕರಡು ಪ್ರತಿಯಲ್ಲಿಲ್ಲ.  ಶಾಲಾ ಮುಗ್ಧತೆಯನ್ನು ಮೀರಿದ ಲೌಕಿಕ ಚಿಂತನೆಗಳು ಇಲ್ಲಿವೆ, ಜತೆಗೆ ಒಂದಷ್ಟು ನಗುವಿದೆ, ಅವರು ತುಮಕೂರಿನಲ್ಲಿ ಒಗ್ಗೂಡಿ ಕೆಲಸ ಮಾಡುತ್ತಿದ್ದ `ಸನ್ಮಿತ್ರ ಸಂಘ’ದ ಚಟುವಟಿಕೆಗಳ ಬಗ್ಗೆ ಪ್ರಸ್ತಾಪವಿದೆ.  ಶಾಲಾ ವಿದ್ಯಾರ್ಥಿಗಳು ಅಂದು ಹೊರ ತರುತ್ತಿದ್ದ `ಕೇಸರಿ’ ಎಂಬ ನಿಯತಕಾಲಿಕದ ಬಗ್ಗೆ ಉಲ್ಲೇಖವಿದೆ.  ಇವೆಲ್ಲಕ್ಕೂ ಹೆಚ್ಚಾಗಿ ಬೆಂಗಳೂರಿನ ಬಗ್ಗೆ ಬೆರಗುಗಣ್ಣಿನ ನೋಟವಿದೆ.  ಒಂದು ಪತ್ರದೊಳಗೆ (ಬಹುಶಃ ಅಂಚೆ ಕಾರ್ಡಿನಲ್ಲಿ) ಅದೆಲ್ಲವನ್ನೂ ಅಡಕ ಮಾಡಿರುವ ಪರಿ, ನಿಜಕ್ಕೂ ಅಚ್ಚರಿ! 

                - ಹಾಲ್ದೊಡ್ಡೇರಿ  ಸುಧೀಂದ್ರ

Advertisement
Published in: on March 19, 2007 at 4:30 pm  Leave a Comment  

The URI to TrackBack this entry is: http://nammabengalooru.wordpress.com/2007/03/19/bangalore-has-been-intoxicating-from-ages/trackback/

RSS feed for comments on this post.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

Follow

Get every new post delivered to your Inbox.